Site icon Kannada Sakshi | Kannada News | ಕನ್ನಡ ಸುದ್ದಿ | Latest Karnataka News

Heart Attack | ಒಂದೇ ದಿನ ಹೃದಯಾಘಾತದಿಂದ 8 ಮಂದಿ ಸಾವು..!

ಬೆಂಗಳೂರು | ರಾಜ್ಯದಲ್ಲಿ ಹೃದಯಾಘಾತದ (Heart Attack) ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೇವಲ ಒಂದೇ ದಿನ (ಜುಲೈ 6) ರಾಜ್ಯದ ವಿವಿಧ ಭಾಗಗಳಲ್ಲಿ ಎಂಟು ಮಂದಿ ಹೃದಯಾಘಾತದಿಂದ ಸಾವಿಗೀಡಾಗಿರುವ ದುಃಖದ ಘಟನೆಗಳು ವರದಿಯಾಗಿವೆ.

ಹೃದಯಾಘಾತಕ್ಕೆ (Heart Attack) 6 ಜಿಲ್ಲೆಯಲ್ಲಿ 8 ಜನರ ಸಾವು

ಚಾಮರಾಜನಗರ: ರಾಮಸಮುದ್ರದ ಶಿವಕುಮಾರ್ (52) ಮನೆಯಲ್ಲಿ ಕುಸಿದುಬಿದ್ದು, ಆಸ್ಪತ್ರೆಗೆ ದಾಖಲಿಸಿದರೂ, ಇಸಿಜಿ ಮಾಡುವಷ್ಟರಲ್ಲಿ ಕೊನೆಯುಸಿರು ಎಳೆದಿದ್ದಾರೆ.

ಹಾಸನ: ಮಂಗಳೂರಿನಿಂದ ಹಿಂದಿರುಗುತ್ತಿದ್ದ ಜಯನಗರದ ರಂಗನಾಥ್ (57) ಕಾರಿನಲ್ಲಿ ಎದೆನೋವು ಕಾಣಿಸಿಕೊಂಡು, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮೃತಪಟ್ಟರು. ಮತ್ತೊಬ್ಬ, ಕೊಂಗಲಬೀಡು ಗ್ರಾಮದ ಆನಂದ್ (44) ರಾತ್ರಿ ಎದೆನೋವು ಕಾಣಿಸಿಕೊಂಡು ಮೃತಪಟ್ಟಿದ್ದಾರೆ. ಹಾಸನದಲ್ಲಿ ಒಂದೂವರೆ ತಿಂಗಳಲ್ಲಿ 37 ಹೃದಯಾಘಾತ ಸಾವುಗಳು ನಡೆದಿವೆ.

ಯಾದಗಿರಿ: ಶೆಟ್ಟಿಕೇರಾ ಗ್ರಾಮದ ಹಳ್ಳೆಪ್ಪ ಪೂಜಾರಿ (44) ಮೊಹರಂ ಆಚರಣೆ ಬಳಿಕ ಅಲ್ಪಕಾಲದಲ್ಲೇ ಹೃದಯಾಘಾತದಿಂದ ಮೃತಪಟ್ಟರು.

ಹುಬ್ಬಳ್ಳಿ: ಕಿಮ್ಸ್ ಆಸ್ಪತ್ರೆಯಲ್ಲಿ ಆಯಾ ಆಗಿ ಕೆಲಸ ಮಾಡುತ್ತಿದ್ದ ನಜೀರಮ್ಮ (53) ಆಸ್ಪತ್ರೆಯಲ್ಲಿಯೇ ಕುಸಿದು ಸಾವಿಗೀಡಾದರು.

ಇದನ್ನು ಓದಿ : Pilibhit Crime | BSF ಯೋಧನ ಪತ್ನಿ ಮೇಲೆ ಮೈದುನನಿಂದಲೇ ಅತ್ಯಾಚಾರ

ಚಿಕ್ಕಬಳ್ಳಾಪುರ: ತೊಂಡೇಬಾವಿಯ ಯೋಧ ಗಂಗಾಧರಪ್ಪ (54) ಪಶ್ಚಿಮ ಬಂಗಾಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಚಿಕ್ಕಮಗಳೂರು: ಮೀನಾಕ್ಷಿ (29) ಕಾರಿನಲ್ಲಿ ಎದೆನೋವು ಕಾಣಿಸಿಕೊಂಡು ಮೃತಪಟ್ಟರೆ, ವೃದ್ಧೆ ಸುಮಿತ್ರೆಗೌಡ (75) ಮನೆಯಲ್ಲಿ ಕುಸಿದು ಸಾವಿಗೀಡಾದರು.

ಈ ಆಘಾತಕಾರಿ ಪ್ರಕರಣಗಳು ಜೀವನಶೈಲಿಯ ಮೇಲೆ ಗಂಭೀರ ಚಿಂತನೆ ಮಾಡುವಂತೆ ಮಾಡುತ್ತವೆ. ನಿಯಮಿತ ತಪಾಸಣೆ, ಸ್ಮೋಕಿಂಗ್ ಹಾಗೂ ಅಲ್ಕೋಹಾಲ್ ದೂರವಿಡುವುದು, ತೂಕ ನಿಯಂತ್ರಣ, ಒತ್ತಡ ನಿರ್ವಹಣೆ, ಆರೋಗ್ಯಕರ ಆಹಾರ ಮತ್ತು ವ್ಯಾಯಾಮದ ಮಹತ್ವವನ್ನು ತಜ್ಞರು ಪುನರಾವರ್ತಿಸುತ್ತಿದ್ದಾರೆ.

ರಾಜ್ಯದಲ್ಲಿ ಹೃದಯಾಘಾತದ (Heart Attack) ಪ್ರಮಾಣ ಹೆಚ್ಚುತ್ತಿರುವುದು ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಎಚ್ಚರಿಕೆಯ ಘಂಟೆ ತಂದಿದೆ. ಸರ್ಕಾರ ಮತ್ತು ಜನರು ಈ ಬಗ್ಗೆ ಗಂಭೀರ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ.

Exit mobile version