ನವದೆಹಲಿ | ಕರ್ನಾಟಕದ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆಗೆ (Yettinahole Project) ಕೇಂದ್ರ ಸರ್ಕಾರದಿಂದ ತೀವ್ರ ಹಿನ್ನಡೆ ಎದುರಾಗಿದೆ. ಯೋಜನೆಗೆ ಅಗತ್ಯವಿದ್ದ 423 ಎಕರೆ ಹೆಚ್ಚುವರಿ ಅರಣ್ಯ ಭೂಮಿ ಬಳಕೆಗೆ ಕೇಂದ್ರ ಪರಿಸರ ಸಚಿವಾಲಯ ಅನುಮೋದನೆ ನೀಡಲು ನಿರಾಕರಿಸಿದೆ. ಈ ನಿರ್ಧಾರದಿಂದಾಗಿ ಯೋಜನೆಯ ಮುಂದಿನ ಹಂತಗಳು ವಿಳಂಬವಾಗುವ ಸಾಧ್ಯತೆ ಹೆಚ್ಚಾಗಿದೆ.
ಹಾಸನ ಮತ್ತು ತುಮಕೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ 432 ಎಕರೆ ಅರಣ್ಯ ಭೂಮಿಯನ್ನು ‘ಗುರುತ್ವಾಕರ್ಷಣೆ ಕಾಲುವೆ’ ನಿರ್ಮಾಣಕ್ಕಾಗಿ ಬಳಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಈ ವರ್ಷ ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಕುರಿತು ಡಿಐಜಿಎಫ್ ಪ್ರಣಿತಾ ಪೌಲ್ ನೇತೃತ್ವದ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಿತ್ತು.
ಅನುಮತಿ ಇಲ್ಲದೆ ಎತ್ತಿನಹೊಳೆ ಯೋಜನೆಗೆ (Yettinahole Project) ಭೂಮಿ ಬಳಕೆ?
ಸ್ಥಳ ಪರಿಶೀಲನೆ ಬಳಿಕ ಮಂಡಿಸಿದ ವರದಿಯಲ್ಲಿ, ಯೋಜನೆಯ ಅನುಮೋದನೆ ಇನ್ನೂ ಲಭ್ಯವಾಗದೇ ಇರುವುದಕ್ಕೂ ಮುನ್ನವೇ ಅರಣ್ಯ ಭೂಮಿ ಬಳಸಿರುವುದಾಗಿ ಉಲ್ಲೇಖಿಸಲಾಗಿದೆ. ಇದು ಅರಣ್ಯ ಕಾಯ್ದೆಯ ಉಲ್ಲಂಘನೆಯಾಗಿದ್ದು, ಸರ್ಕಾರಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಶಿಫಾರಸು ಮಾಡಲಾಗಿದೆ. ಲೋಪಗಳನ್ನು ಸರಿಪಡಿಸಿ, ಸಮಜಾಯಿಷಿ ನೀಡಿದ ಬಳಿಕ ಮಾತ್ರ ಮುಂದಿನ ಸಭೆಯಲ್ಲಿ ಮರುಪರಿಗಣನೆ ಸಾಧ್ಯವೆಂದು ತಿಳಿಸಲಾಗಿದೆ.
ಇದನ್ನು ಓದಿ : Leopard In Village | ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಬಿತ್ತು ಬೋನಿಗೆ..!
ಷರತ್ತುಗಳ ಉಲ್ಲಂಘನೆ : ಯೋಜನೆಗೆ ತಡೆ
2016ರಲ್ಲೇ 13.93 ಹೆಕ್ಟೇರ್ ಅರಣ್ಯ ಭೂಮಿಗೆ ಕೇಂದ್ರದಿಂದ ಅನುಮೋದನೆ ದೊರೆತಿತ್ತು. ಆದರೆ ವಿಧಿಸಲಾಗಿದ್ದ 33 ಷರತ್ತುಗಳಲ್ಲಿ ಬಹುಪಾಲು ಪಾಲನೆಯಾಗಿಲ್ಲ. ಇದರಿಂದಾಗಿ ಕಾಮಗಾರಿಯ ಸಮಯದಲ್ಲಿ ಭೂಕುಸಿತ, ಮಣ್ಣಿನ ಕೊರೆತ, ಮನೆ ಹಾನಿ ಮುಂತಾದ ಪರಿಸರ ಸಮಸ್ಯೆಗಳು ಉಂಟಾಗಿವೆ. ಈ ಕುರಿತ ಆಕ್ಷೇಪಗಳು ಎನ್‌ಜಿಟಿ ಮೇಲ್ವಿಚಾರಣಾ ವರದಿಯಲ್ಲಿ ಉಲ್ಲೇಖವಾಗಿವೆ.

ಯೋಜನೆಯ ಬಗ್ಗೆ ಪೂರಕ ಮಾಹಿತಿ
ಎತ್ತಿನಹೊಳೆ ಯೋಜನೆಯಡಿಯಲ್ಲಿ (Yettinahole Project) 24 ಟಿಎಂಸಿ ನೀರನ್ನು ಎತ್ತಿನಹೊಳೆ ನದಿಯಿಂದ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಬೆಂಗಳೂರು, ರಾಮನಗರ, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ಪೂರೈಕೆ ಮಾಡುವ ಗುರಿಯಿದೆ. ಯೋಜನೆಯ ಮೊದಲ ಹಂತ 2024ರ ಸೆಪ್ಟೆಂಬರ್‌ನಲ್ಲಿ ಸಕಲೇಶಪುರದಲ್ಲಿ ಉದ್ಘಾಟನೆಯಾಗಿತ್ತು.